ಫಿಲಡೆಲ್ಫಿಯ 1 - 

 ಅಮೆರಿಕ ಸಂಯುಕ್ತ ಸಂಸ್ಥಾನಗಳ ಪೆನ್ಸಿಲ್ವೇನಿಯ ರಾಜ್ಯದ ಒಂದು ನಗರ. ಅಮೆರಿಕದ ಮಹಾನಗರಗಳಲ್ಲಿ 4ನೆಯದು. ಡೆಲವೇರ್ ಮತ್ತು ಸ್ಕೂಲ್‍ಕಿಲ್ ನದಿಗಳ ಸಂಗಮಪ್ರದೇಶದಲ್ಲಿರುವ ಈ ಮಹಾನಗರದ ಒಟ್ಟು ವಿಸ್ತೀರ್ಣ 333 ಚ ಕಿಮೀ. ಪೆನ್ಸಿಲ್ವೇನಿಯ ರಾಜ್ಯದ ಆಗ್ನೇಯದಲ್ಲಿರುವ ಈ ನಗರದ ಈಶಾನ್ಯಕ್ಕೆ ಸುಮಾರು 145ಕಿಮೀ ದೂರದಲ್ಲಿ ನ್ಯೂಯಾರ್ಕ್‍ನಗರವೂ ನೈಋತ್ಯಕ್ಕೆ ಸುಮಾರು 217 ಕಿಮೀ ದೂರದಲ್ಲಿ ವಾಷಿಂಗ್‍ಟನ್ ನದಿ ನ್ಯೂಜರ್ಸಿಯನ್ನು ಫಿಲಡೆಲ್ಫಿಯದಿಂದ ಪ್ರತ್ಯೇಕಿಸಿದೆ. ಈ ಮಹಾನದಿ ಸಂಚಾರಕ್ಕೆ ಅನುಕೂಲವಾಗಿದ್ದು ಫಿಲಿಡೆಲ್ಫಿಯ ನಗರಕ್ಕೂ ಅಟ್ಲಾಂಟಿಕ್ ಸಾಗರಕ್ಕೂ ಸಂಪರ್ಕ ಕಲ್ಪಿಸಿದೆ. ನಗರ ಜನಸಂಖ್ಯೆ 4,716,818 (1980). 

ನಗರದ ಹಳೆಯ ಭಾಗದಲ್ಲಿ ಅಮೆರಿಕದ ಸ್ವಾತಂತ್ರ್ಯವನ್ನು ಘೋಷಿಸಿದ ಗಂಟೆಯನ್ನು ಒಳಗೊಂಡ ಅಮೆರಿಕ ಸ್ವಾತಂತ್ರ್ಯ ಸ್ಮಾರಕ ಭವನ (ಇಂಡಿಪೆಂಡೆನ್ಸ್ ಹಾಲ್), 1790ರಿಂದ 1800ರ ತನಕ ಕಾಂಗ್ರೆಸ್ ಸಭೆ ಅಧಿವೇಶನಗೊಂಡ ಕಾಂಗ್ರೆಸ್‍ಹಾಲ್, ಅಮೆರಿಕ ಸಂಯುಕ್ತ ಸಂಸ್ಥಾನಗಳ ಪ್ರಪ್ರಥಮ ರಾಷ್ಟ್ರೀಯ ಕಾಂಗ್ರೆಸ್ ಸಂಧಿಸಿದ ಕಾರ್ಪೆಂಡರ್ಸ್ ಹಾಲ್ ಮುಂತಾದವು ಇಲ್ಲಿಯ ರಾಷ್ಟ್ರೀಯ ಉದ್ಯಾನದಲ್ಲಿವೆ. ಈ ರಾಷ್ಟ್ರೀಯ ಉದ್ಯಾನದ ಬಳಿಯೇ ಅಮೆರಿಕದ ರಾಷ್ಟ್ರಧ್ವಜ ರೂಪುಗೊಂಡ ಸ್ಥಳವಾದ ಬೆಟ್ಸಿರಾಸ್ ಹಾಲ್ ಇದೆ. ಫಿಲಡೆಲ್ಫಿಯಾದ ವಸಾಹತು ಕಾಲದ ಪ್ರಾಚೀನ ಚರ್ಚುಗಳಲ್ಲಿ ಲೂಥರ್ ಪಂಥದ ಕ್ರೈಸ್ತರು 1700ರಲ್ಲಿ ಕಟ್ಟದ ಗ್ಲೋರಿಯಾ ಚಚ್ರ್À, 1727-54ರ ನಡುವೆ ಕಟ್ಟಿದ ಕ್ರೈಸ್ಟ್ ಚರ್ಚ್ ಹಾಗೂ 1733-34ರ ನಡುವೆ ರೋಮನ್ ಕ್ಯಾಥೋಲಿಕ್ ಜನ ಕಟ್ಟಿಸಿದ ಸಂತ ಜೋಸೆಫ್ ಚರ್ಚ್ ಪ್ರಸಿದ್ಧವಾದವು. ಇಲ್ಲಿಯ ಫೇರ್‍ಮೌಂಟ್ ಪಾರ್ಕ್ ಪ್ರಪಂಚದ ಮಹಾನಗರೋದ್ಯಾನಗಳಲ್ಲಿ ಒಂದು. ಪಟ್ಟಣದ ವಾಯವ್ಯ ಭಾಗದಲ್ಲಿ ಸುಮಾರು 14 ಕಿಮೀ ದೂರ ವ್ಯಾಪಿಸಿರುವ ಈ ಉದ್ಯಾನದಲ್ಲಿರುವ ಮೃಗಾಲಯ ಅಮೆರಿಕ ರಾಷ್ಟ್ರದ ಮೃಗಾಲಯಗಳಲ್ಲಿ ಮೊತ್ತ ಮೊದಲನೆಯದು (1859).

	ಜನ ಒತ್ತಾಗಿ ನೆಲಸಿರುವ ಹಳೆಯ ನಗರಭಾಗ ಜರ್ಮನ್ ಟೌನ್, ವಿಸಾಹಿಕನ್ ಎಂಬ ಸಣ್ಣ ತೊರೆಯ ಅಂಚಿನಲ್ಲಿದೆ. 1683ರಲ್ಲಿ ಜರ್ಮನಿಯಿಂದ ಬಂದ ವಲಸೆಗಾರರು ಫ್ರಾನ್ಸಿಸ್ ಡೇನಿಯಲ್ ಪಸ್ಟೋರಿಯಸ್ ಎಂಬಾತನ ಮುಖಂಡತ್ವದಲ್ಲಿ ಈ ಜರ್ಮನರ ಕೇರಿಯನ್ನು ಸ್ಥಾಪಿಸಿದರು. ಫಿಲಿಡೆಲ್ಫಿಯಾಕ್ಕೆ ಸೇರಿದ ಡೆಲವೇರ್ ಮತ್ತು ಸ್ಕೂಲ್‍ಕಿಲ್ ನದಿದಂಡೆಗಳ ಸುಮಾರು 52 ಕಿಮೀ ಉದ್ದಕ್ಕೂ ಬೃಹತ್ ಗಿರಣಿಗಳು, ಹಡಗುಕಟ್ಟೆಗಳು, ಹಡಗು ಕಟ್ಟುವ ಕಾರ್ಖಾನೆಗಳು ಹಾಗೂ ಮಳಿಗೆಗಳು ಉಂಟು. ಫಿಲಡೆಲ್ಫಿಯ ರೇವು ಒಂದು ಉತ್ತಮ ಹಡಗು ನಿಲ್ದಾಣ.

	ಫಿಲಡೆಲ್ಫಿಯ ಮಹಾನಗರ ಪ್ರದೇಶ ಪೆನ್ಸಿಲ್ವೇನಿಯಾದ ಬಕ್ಸ್, ಮಾಂಟ್ಗೋಮೆರಿ, ಚೆಸ್ಟರ್, ಡೆಲವೇರ್ ಹಾಗೂ ನ್ಯೂಜರ್ಸಿಂiÀi ಗ್ಲಾಸ್ಟರ್, ಬರ್ಲಿಂಗ್‍ಟನ್ ಮತ್ತು ಕ್ಯಾಂಡೆನ್ ಕೌಂಟಿ ಭಾಗಗಳನ್ನು ಒಳಗೊಂಡಿದೆ. ಆಂಡ್ಮೋರ್, ಬ್ರಿನ್‍ಮಾವರ್, ಹಾವರ್‍ಫೋರ್ಡ್ ಹಾಗೂ ವಲ್ಲನೋವ ಬಡಾವಣೆಗಳು, ಮತ್ತು ನಾರಿಸಟನ್ ಮತ್ತು ಕಾನ್‍ಷೂ ಹೊಕೆನ್ ಕೈಗಾರಿಕಾ ಬಡಾವಣೆಗಳು ಸ್ಕೂಲ್‍ಕಿಲ್ ನದಿಂiÀi ದಂಡೆಯ ಮೇಲಿವೆ. ಗಣಿಗಳು ಹಾಗೂ ಕಾರ್ಖಾನೆಗಳು ನಗರದ ದಕ್ಷಿಣಕ್ಕೆ ಚೆಸ್ಟರ್‍ಟನ್ನಿನಿಂದ ಹಿಡಿದು ವಿಲ್ಮಿಂಗ್‍ಟನ್ ವರೆಗೆ ಹರಡಿಕೊಂಡಿವೆ.

	ಪೆನ್ಸಿಲ್ವೇನಿಯಾ ಪ್ರಾಂತ್ಯವನ್ನು 1681ರಲ್ಲಿ ಇಂಗ್ಲೆಂಡಿನ ದೊರೆ ಎರಡನೆಯ ಚಾಲ್ರ್ಸ್ ನಿಂದ ವಿಲಿಯಮ್ ಪೆನ್ ಪಡೆದುಕೊಂಡು 1682ರಲ್ಲಿ ಈ ಪಟ್ಟಣವನ್ನು ಸ್ಥಾಪಿಸಿದ. ಅಮೆರಿಕದಲ್ಲಿ ವಲಸೆಗಾರರು ಯೋಜಿತ ರೀತಿಯಲ್ಲಿ ಕಟ್ಟಿದ ಮೊದಲ ಪಟ್ಟಣವಿದು. ಇಂಗ್ಲೆಂಡ್ ಮತ್ತು ಯೂರೋಪಿನ ಜನ ತಮ್ಮ ಧರ್ಮಾಚರಣೆಗಿದ್ದ ಕಿರುಕುಳದಿಂದ ಪಾರಾಗಲು ಸ್ವದೇಶಗಳನ್ನು ಬಿಟ್ಟು ಸಹಬಾಳ್ವೆಗಾಗಿ ಇಲ್ಲಿಗೆ ಬಂದು ನೆಲಸಿದಕಾರಣ ಪಟ್ಟಣಕ್ಕೆ ಫಿಲಡೆಲ್ಫಿಯ ಎಂಬ ಹೆಸರು ಬಂತು. ಗ್ರೀಕ್ ಭಾಷೆಯಲ್ಲಿ ಭ್ರಾತೃಪ್ರೇಮ ಎಂದರ್ಥ. 1683ರಿಂದ 1799ರ ತನಕ ಇದು ಪೆನ್ಸಿಲ್ವೇನಿಯಾದ ರಾಜಧಾನಿಯಾಗಿತ್ತು. 1790ರಿಂದ 1800ರ ತನಕ ಸಂಯುಕ್ತ ಸಂಸ್ಥಾನಗಳ ರಾಜಧಾನಿಯಾಗಿತ್ತು.

	ಇಂಗ್ಲೆಂಡಿನ ವಿರುದ್ಧ ಅಮೆರಿಕ ಸ್ವಾತಂತ್ರ್ಯ ಯುದ್ಧದಲ್ಲಿ (1775-83) ಫಿಲಡೆಲ್ಫಿಯದ ಪಾತ್ರಮುಖ್ಯವಾದದ್ದು. ಯುದ್ಧ ಪ್ರಾರಂಭವಾಗುವುದಕ್ಕೆ ಮುಂಚೆಯೇ ಅಲ್ಲಿಯ ಬೆಂಜಮಿನ್ ಫ್ರಾಂಕ್ಲಿನ್ 1757ರಲ್ಲಿ ಇಂಗ್ಲೆಂಡಿಗೆ ಹೋಗಿ ಅಮೆರಿಕದ ಮೇಲೆ ಸುಂಕ ವಿಧಿಸುವ ಬಗ್ಗೆ ನ್ಯಾಯ ಕ್ರಮವನ್ನು ಅನುಸರಿಸಬೇಕೆಂದು ಬ್ರಿಟಿಷ್ ಸರ್ಕಾರದೊಡನೆ ವ್ಯವಹರಿಸಿದ. ಜಾನ್ ಡಿಕಿನ್‍ಸನ್ ಇಂಗ್ಲೆಂಡಿನ ಆಡಳಿತ ನೀತಿಯನ್ನು ಖಂಡಿಸಿ ಲೇಖನಗಳನ್ನು ಬರೆದು ಅಮೆರಿಕದ ಹಕ್ಕುಗಳನ್ನು ಘೋಷಿಸಿದ. 1765ರಲ್ಲಿ ಇಂಗ್ಲೆಂಡ್ ದೊರೆಗೆ ಸಲ್ಲಿಸಿದ ಮನವಿಯನ್ನು ಸಹ ಇವನೇ ಸಿದ್ಧಗೊಳಿಸಿದ. 1774ರಲ್ಲಿ ಅಮೆರಿಕದ ವಸಾಹತುಗಳ ಸಂಯುಕ್ತ ಕಾಂಗ್ರೆಸ್ ಸಭೆ ಫಿಲಡೆಲ್ಫಿಯದ ಕಾರ್ಪೆಂಟರ್ಸ್ ಭವನದಲ್ಲಿ ಸೇರಿ ಅಮೆರಿಕದ ಮೇಲೆ ಇಂಗ್ಲೆಂಡ್ ಸರ್ಕಾರ ವಿಧಿಸಿದ್ದ ಕಾಯಿದೆಗಳನ್ನು ಖಂಡಿಸಿತ್ತು. ಎರಡನೆಯ ಸಂಯುಕ್ತ ಕಾಂಗ್ರೆಸ್ ಸಭೆ 1775ರಲ್ಲಿ ಫಿಲಡೆಲ್ಫಿಯದ ಇಂಡಿಪೆಂಡೆನ್ಸ್ ಹಾಲ್‍ನಲ್ಲಿ ಸೇರಿತು. ಮೂರನೆಯ ವರ್ಷ ಸ್ವಾತಂತ್ರ್ಯ ಘೋಷಣೆಯನ್ನು ರಚಿಸುವ ಬಗ್ಗೆ ಇದೇ ಪಟ್ಟಣದಲ್ಲಿ ಬೆಂಜಮಿನ್ ಫ್ರಾಂಕ್ಲಿನ್, ಥಾಮಸ್ ಜಫರ್‍ಸನ್ನನಿಗೆ ನೆರವಾದ. ಸ್ವಾತಂತ್ರ್ಯಯುದ್ಧ ಕಾಲದಲ್ಲಿ ಫಿಲಡೆಲ್ಫಿಯ ಸ್ವಲ್ಪಕಾಲ ಯುದ್ಧಭೂಮಿಯಾಗಿ ಪರಿಣಮಿಸಿ 1777ರಿಂದ 1778ರ ತನಕ ಪಟ್ಟಣ ಬ್ರಿಟಿಷರ ವಶವಾಗಿತ್ತು. ಅವರನ್ನು ಅಲ್ಲಿಂದ ಓಡಿಸಲು ಜಾರ್ಜ್ ವಾಷಿಂಗ್‍ಟನ್ ಮಾಡಿದ ಪ್ರಯತ್ನ ವಿಫಲವಾಯಿತು. ಮುಂದೆ 1787ರಲ್ಲಿ ಹೊಸ ರಾಷ್ಟ್ರದ ಸಂವಿಧಾನವನ್ನು ಈ ಪಟ್ಟಣದಲ್ಲೆ ಸಭೆಸೇರಿ ರಚಿಸಿದರು.

	1800ರ ದಶಕದಲ್ಲಿ ಫಿಲಡೆಲ್ಫಿಯ ತನ್ನ ಸುತ್ತಮುತ್ತಣ ಪ್ರದೇಶದ ಕಲ್ಲಿದ್ದಲು ಗಣಿಗಳ ಅಭಿವೃದ್ಧಿಗಾಗಿ ಯಂತ್ರೋಪಕರಣಗಳನ್ನು ತಯಾರಿಸುವ ಕೈಗಾರಿಕಾ ಕೇಂದ್ರವಾಯಿತು. 1840-1860ರ ನಡುವೆ ಪಟ್ಟಣದಲ್ಲಿ ಹೊಸ ರಸ್ತೆ, ನಾಲೆ, ಹಾಗೂ ರೈಲು ಮಾರ್ಗಗಳ ನಿರ್ಮಾಣಗಳಾದವು. 1854ರಲ್ಲಿ ಪಟ್ಟಣ ವಿಸ್ತರಿಸಿ ಫಿಲಡೆಲ್ಫಿಯ ಕೌಂಟಿ ಆಡಳಿತ ಪ್ರದೇಶವೂ ಅದಕ್ಕೆ ಸೇರಿ ಮಹಾಪಟ್ಟಣವಾಯಿತು. ಅಮೆರಿಕದ ಅಂತರ್ಯುದ್ಧ ಕಾಲದಲ್ಲಿ (1861-65) ಫಿಲಡೆಲ್ಫಿಯದ ಪಾತ್ರ ಗಣನೀಯವಾದದ್ದು. 1876ರಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನಗಳ ಶತಮಾನೋತ್ಸವವನ್ನು ಫಿಲಡೆಲ್ಫಿಯದಲ್ಲಿ ಆಚರಿಸಲಾಯಿತು. ಫಿಲಡೆಲ್ಫಿಯದ ಜನಸಂಖ್ಯೆ 1,50,000 ಮೀರಿದಾಗ ಜನಸಂಚಾರಕ್ಕಾಗಿ ಟ್ರಾಮ್‍ಕಾರುಗಳ ವ್ಯವಸ್ಥೆಯಾಯಿತು. ಒಂದನೆಯ ಹಾಗೂ ಎರಡನೆಯ ಮಹಾಯುದ್ಧಗಳ ಕಾಲದಲ್ಲಿ ಫಿಲಡೆಲ್ಫಿಯದಲ್ಲಿ ಯುದ್ಧಸಾಮಗ್ರಿ ಹಾಗೂ ಯುದ್ಧ ನಾವೆಗಳನ್ನು ತಯಾರಿಸಲಾಗುತ್ತಿತ್ತು. 1960ರಲ್ಲಿ ನಗರದ ಅಭಿವೃದ್ಧಿಗಾಗಿ ಯೋಜನೆಗಳು ರೂಪಗೊಂಡವು.

	ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿ ಸ್ತ್ರೀ ವಿದ್ಯಾಭ್ಯಾಸವನ್ನು ಪ್ರಥಮವಾಗಿ ತೊಡಗಿದ್ದೂ ಸ್ತ್ರೀಯರಿಗಾಗಿಯೇ ಪ್ರಥಮ ಕಾಲೇಜನ್ನು (1855), ತೊಡಗಿದ್ದೂ ಈ ನಗರದಲ್ಲೇ. ಮಹಿಳೆಯರ ವೈದ್ಯಕೀಯ ಕಾಲೇಜ್ (1850), ಪೆನ್ಸಿಲ್ವೇನಿಯಾ ಲಲಿತ ಕಲೆಗಳ ಅಕಾಡಮಿ (1806), ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯ (1740), ಫಿಲಡೆಲ್ಫಿಯ ಸಂಗೀತ ಅಕಾಡಮಿ (1870)(ಇವೆಲ್ಲ ಈ ನಗರದಲ್ಲಿರುವ ಪ್ರಸಿದ್ಧ ಸಂಸ್ಥೆಗಳು. ಅಮೆರಿಕ ಸಂಯುಕ್ತ ಸಂಸ್ಥಾನಗಳ ಮೊತ್ತಮೊದಲ ಆಸ್ಪತ್ರೆ ಇಲ್ಲಿಯ ಪೆನ್ಸಿಲ್ವೇನಿಯಾ ಆಸ್ಪತ್ರೆ (1751). ಇತ್ತೀಚೆಗೆ ವೆಟರನ್ಸ್ ಸ್ಟೇಡಿಯಮ್ ಎಂಬ ಕ್ರೀಡಾರಂಗ 1971ರಲ್ಲಿ ಸ್ಥಾಪಿತವಾಗಿದೆ. ಅಮೆರಿಕದಲ್ಲಿ ಚಂದಾ ಸದಸ್ಯರ ಗ್ರಂಥಾಲಯಗಳಲ್ಲಿ ಮೊದಲನೆಯದರ ಸ್ಥಾಪನೆ ಬೆಂಜಾಮಿನ್ ಫ್ರಾಂಕ್ಲಿನನಿಂದ ಆಯಿತು (1731). ಅಮೆರಿಕ ಇತಿಹಾಸದ ಬೃಹತ್ ಹಸ್ತಪ್ರತಿ ಗ್ರಂಥಾಲಯಗಳಲ್ಲಿ ಫಿಲಡೆಲ್ಫಿಯದ ಪೆನ್ಸಿಲ್ವೇನಿಯಾ ಹಿಸ್ಟಾರಿಕಲ್ ಸೊಸೈಟಿ ಎರಡನೆಯದು. ಮೊದಲನೆಯದು ಲೈಬ್ರರಿ ಆಫ್ ಕಾಂಗ್ರೆಸ್. ಅಮೆರಿಕದ ಅತ್ಯಂತ ದೊಡ್ಡ ವೈಜ್ಞಾನಿಕ ಸಂಗ್ರಹಾಲಯ ಫಿಲಡೆಲ್ಫಿಯದ ಫ್ರಾಂಕ್ಲಿನ್ ಇನ್‍ಸ್ಟಿಟ್ಯೂಟ್. ಈ ಪಟ್ಟಣದಲ್ಲಿ 1812ರಲ್ಲಿ ಅಸ್ತಿತ್ವಕ್ಕೆ ಬಂದ ಪ್ರಾಕೃತ ವಿಜ್ಞಾನಗಳ ಅಕಾಡೆಮಿ ಪ್ರಪಂಚದ ಅತ್ಯಂತ ಪ್ರಾಚೀನ ಅಕಾಡಮಿಗಳಲ್ಲೊಂದು. ಕವಿ ಎಡ್ಗರ್ ಅಲೆನ್ ಪೋ 1842 ಮತ್ತು 1844ರ ನಡುವೆ ಫಿಲಡೆಲ್ಫಿಯದಲ್ಲಿ ವಾಸವಾಗಿದ್ದ ಗೃಹ ಈಗ ವಸ್ತುಪ್ರದರ್ಶನ ಶಾಲೆಯಾಗಿದೆ. ಅಲೆನ್ ಪೋನ ಕೃತಿಗಳ ಮೊದಲ ಮುದ್ರಣದ ಪ್ರತಿಗಳು ಇಲ್ಲಿ ಪ್ರದರ್ಶಿತವಾಗಿವೆ. ಬಾಸ್ಟನ್ ನಗರದಿಂದ ಬಂದು ಇಲ್ಲಿ ನೆಲಸಿದ ಬೆಂಜಮಿನ್ ಫ್ರಾಂಕ್ಲಿನ್ ವೈಜ್ಞಾನಿಕ ಹಾಗೂ ಸಾಂಸ್ಕøತಿಕ ಕ್ಷೇತ್ರಗಳಲ್ಲಿ ಪ್ರಮುಖ ಪಾತ್ರವಹಿಸಿದ.

	ಫಿಲಡೆಲ್ಫಿಯ ವಿವಿಧ ಗ್ರಂಥಗಳ ಹಾಗೂ ಪತ್ರಿಕೆಗಳ ಪ್ರಕಟಣೆಯ ಮಹಾಕೇಂದ್ರಗಳಲ್ಲೊಂದು. ಅಮೆರಿಕದ ಸಂಯುಕ್ತ ಸಂಸ್ಥಾನಗಳ ಮೊತ್ತಮೊದಲ ದಿನಪತ್ರಿಕೆಯಾದ ಪೆನ್ವಿಲ್ವೇನಿಯಾ ಪ್ಯಾಕೆಟ್ ಪ್ರಕಟವಾದದ್ದು ಫಿಲಡೆಲ್ಫಿಯದಲ್ಲಿ (1784). ಇಲ್ಲಿಯ ಮತ್ತೊಂದು ಹಳೆಯ ಪತ್ರಿಕೆ ಸಾಟರ್ಡೇ ಈವ್ನಿಂಗ್ ಪೋಸ್ಟ್ ಪ್ರಕಟನೆ ಪ್ರಾರಂಭವಾದದ್ದು 1821ರಲ್ಲಿ. ಇಂದು ಫಿಲಡೆಲ್ಫಿಯ ಭಾರಿ ಕೈಗಾರಿಕೆಗಳ ನಗರ. ಇಲ್ಲಿ ಸುಮಾರು 5000ಕ್ಕೂ ಹೆಚ್ಚಿನ ಕಾರ್ಖಾನೆಗಳಿವೆ. ವಿದ್ಯುತ್ ಹಾಗೂ ರಾಸಾಯನಿಕ ವಸ್ತುಗಳು, ಚರ್ಮದ ಸಾಮಾನು, ವಿಜ್ಞಾನ ಸಂಬಂಧವಾದ ಯಂತ್ರೋಪಕರಣ, ಔಷಧ, ಕ್ಯಾಮರಾ, ಟೇಪ್‍ರೆಕಾರ್ಡರ್, ರೇಡಿಯೊ ಟೆಲಿವಿಷನ್ ಮುಂತಾದವುಗಳ ತಯಾರಿಕೆಗೆ ಪ್ರಸಿದ್ಧ.
(ವಿ.ಜಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ